ಊದುಬತ್ತಿ ಉದ್ಯಮ
ಸಾಂಬ್ರಾಣಿ, ಹಾಲುಮಡ್ಡಿ, ಗಂಧದಪುಡಿ ಮುಂತಾದ ಸುವಾಸನೆ ಬೀರುವ ವಸ್ತುಗಳ ಸರಿಯನ್ನು ಬಳಿದು ಮಾಡಿರುವ ಕಡ್ಡಿಯನ್ನು ಅಗರಬತ್ತಿ, ಸುವಾಸನೆ ಕಡ್ಡಿ (ಇನ್‍ಸೆನ್ಸ್ ಸ್ಟಿಕ್), ಗಂಧದಕಡ್ಡಿ, ಸಾಂಬ್ರಾಣಿ ಕಡ್ಡಿ, ಜಾಸ್ ಸ್ಟಿಕ್ ಎಂದೂ ಕರೆಯುವುದಿದೆ.

	ದೇವಸ್ಥಾನಗಳಲ್ಲಿ, ಮುಂಜಿ ಮತ್ತು ಮದುವೆ ನಡೆಯುವ ಸ್ಥಳಗಳಲ್ಲಿ ಮತ್ತು ಸಭೆಗಳು ನಡೆಯುವ ಸ್ಥಳಗಳಲ್ಲಿ ಮತ್ತು ಇತರ ಶುಭ ಸಮಾರಂಭಗಳಲ್ಲಿ, ದಿನನಿತ್ಯ ಮನೆಮನೆಗಳಲ್ಲಿ ಸಾಂಬ್ರಾಣಿ ಧೂಪ, ಗಂಧದಕಡ್ಡಿಗಳನ್ನು ವಾಡಿಕೆಯಾಗಿ ಉರಿಸುತ್ತಾರೆ. ಸುವಾಸನೆಯನ್ನು ಬೀರುವ ಇವುಗಳ ಹೊಗೆ ವಾತಾವರಣದ ಸೂಕ್ಷ್ಮ ಕ್ರಿಮಿಗಳನ್ನು ನಾಶಮಾಡಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಾತ್ಕಾಲಿಕವಾಗಿ ತಡೆಯುತ್ತದೆ. ಪ್ರಾಯಶಃ ಈ ಉದ್ದೇಶದಿಂದಲೇ ರೋಗಿಗಳ ಮತ್ತು ಬಾಣಂತಿಯರ ಕೊಠಡಿಗಳಲ್ಲಿ ಸಾಂಬ್ರಾಣಿ (ಗಮ್ ಬೆಂಜೋಯಿನ್) ಹೊಗೆಯನ್ನು ಹಾಕಿರುತ್ತಾರೆ. ಚಿತ್ತೈಕಾಗ್ರತೆಯಿಂದ ದೇವರ ಧ್ಯಾನ ಮಾಡಲು ಈ ಸುವಾಸನೆ ಸೌಲಭ್ಯ ಒದಗಿಸುತ್ತದೆ. ಹಿಂದಿನ ಕಾಲದಲ್ಲಿ ಹಲಗಾರತಿಯ ಕೆಂಡದಮೇಲೆ ದಶಾಂಗದ ಪುಡಿ ಉದುರಿಸಿ, ಬೇಕಾದ ಸುವಾಸನೆಯನ್ನು ಪಡೆಯುತ್ತಿದ್ದರು. ಈ ಸುಗಂಧ ವಾತಾವರಣವನ್ನು ಪಡೆಯಲು ಈಗ ಊದುಬತ್ತಿಯನ್ನು ಬಳಸಲಾಗುತ್ತಿದೆ.

	ಊದುಬತ್ತಿ ಕೈಗಾರಿಕೆಯಲ್ಲಿ ವಿವಿಧ ಬೇರುಗಳು, ಮರಗಳು, ಬೀಜಗಳು, ತೊಗಟೆಗಳು, ಎಲೆಗಳು, ಗೋಂದುಗಳು, ಹೂಗಳು ಇತ್ಯಾದಿ ಅನೇಕ ಕಚ್ಚಾ ವಸ್ತುಗಳನ್ನು ಬಳಸುತ್ತಾರೆ. ಮರಗಳಲ್ಲಿ ಮುಖ್ಯವಾದುವು ಗಂಧ, ಅಗರ್ ಮತ್ತು ದೇವದಾರು; ಬೇರುಗಳಲ್ಲಿ ಮುಖ್ಯವಾದುವು ಖಸ್, ಕಾಸ್‍ಕಸ್, ನಲ್ ಮತ್ತು ಕೆಲೋಮಸ್; ತೊಗಟೆಗಳಲ್ಲಿ ಮುಖ್ಯವಾದುವು ದಾಲ್ಚಿನ್ನಿ, ಕಪೂರಕಚ್ರಿ; ಬೀಜಗಳಲ್ಲಿ ಮುಖ್ಯವಾದುವು ಆಮ್ ಬ್ರೆಟ್ಟೆ, ಆನಿಬೀಜ, ಕಸ್ತೂರಿ, ಮೆಲೊ, ಅಜವಾನ, ಗೌಲ, ಏಲಕ್ಕಿ; ಎಲೆಗಳಲ್ಲಿ ಮುಖ್ಯವಾದುವು ದವನ, ಪಟ್‍ಚೌಲಿ; ಹೂಗಳಲ್ಲಿ ಮುಖ್ಯವಾದುವು ಒಣಗಿದ ಗುಲಾಬಿ ಮೊಗ್ಗು, ಕೇಸರಿ, ಜಾಜಿ, ಬಕುಳ, ಲಾರೆಲ್ಸ್, ಇದಲ್ಲದೆ ಇದಕ್ಕೆ ಬಳಸುವ ಇತರ ವಸ್ತುಗಳೆಂದರೆ ಕಲ್ಲುಹೂ, ಓಕ್ ಮಾಸ್, ಸ್ಟೈರಾಕ್ಸಿ, ಬೆನ್ ಜೋಯಿನ್, ಮಿರ್, ಒಲಿಬಾನಮ್, ಹಾಲುಮಡ್ಡಿ, ಗೋಂದು ಮತ್ತು ರೇಸಿನ್, ಪ್ರಕೃತಿಯಲ್ಲಿ ದೊರೆಯುವ ಅತ್ಯಂತ ಬೆಲೆಬಾಳುವ ಸುಗಂಧ ವಸ್ತುಗಳೆಂದರೆ ಕಸ್ತೂರಿ, ಪುನುಗು ಮತ್ತು ಆಂಬರ್.

	ಈ ಮೇಲಿನ ಕಚ್ಚಾ ಪದಾರ್ಥಗಳನ್ನು ಊದುಬತ್ತಿ ಕೈಗಾರಿಕೆಯನ್ನೇ ಕುಲಕಸುಬಾಗುಳ್ಳವರು ಬಳಸುತ್ತಾರೆ. ಕಸ್ತೂರಿ, ಪುನುಗು ಇತ್ಯಾದಿಗಳನ್ನು ಇತ್ತೀಚೆಗೆ ಕೃತಕ ರೀತಿಯಲ್ಲಿ ತಯಾರಿಸುತ್ತಿದ್ದಾರೆ. ಈ ಕೃತಕ ವಸ್ತುಗಳ ಬೆಲೆ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಎಲೆ, ಬೇರು, ತೊಗಟೆ ಮತ್ತು ರೇಸಿನ್‍ಗಳಿಂದ ಸುಗಂಧದ ಎಣ್ಣೆಗಳನ್ನು ಬಟ್ಟಿ ಇಳಿಸಿ ಊದುಬತ್ತಿಯಲ್ಲಿ ಬಳಸುತ್ತಾರೆ. ಕೃತಕ ರೂಪದಲ್ಲಿ ತಯಾರಾದ ಸುಗಂಧ ಎಣ್ಣೆಗಳೂ ಹೇರಳವಾಗಿ ದೊರೆಯುತ್ತವೆ. ಎರಡನೆಯ ಮಹಾಯುದ್ಧ ಮುಗಿದ ಅನಂತರ ಊದು ಬತ್ತಿ ಕೈಗಾರಿಕೆಯಲ್ಲಿ ಪ್ರಕೃತಿಯಿಂದ ದೊರಕುವ ಸುವಾಸನೆ ಎಣ್ಣೆಗಳ ಬಳಕೆ ಹೆಚ್ಚಿದೆ. 

	ತಾನು ಬಳಸುವ ಪುಡಿಗಳ ಮಿಶ್ರಣ, ಪ್ರಮಾಣ ಮತ್ತು ತಯಾರಿಸುವ ರೀತಿ ಈ ವಿಷಯಗಳನ್ನು ಪ್ರತಿಯೊಬ್ಬ ಊದುಬತ್ತಿ ತಯಾರಕನೂ ರಹಸ್ಯವಾಗಿ ಇಟ್ಟಿರುತ್ತಾನೆ. ಕಚ್ಚಾ ಪದಾರ್ಥಗಳನ್ನು ಸಣ್ಣಗೆ ಪುಡಿಮಾಡಿ, ಅಂಟಿಸುವ ವಸ್ತುವಿನ ಜೊತೆ ವಿವಿಧ ರೀತಿಯಿಂದ ಬೆರೆಸಿ, ಕಡೆಗೆ ತೆಳ್ಳಗಿರುವ ಬಿದಿರಿನ ಕಡ್ಡಿಗೆ ಈ ಮಿಶ್ರಣವನ್ನು ಹಚ್ಚಿ ಒಣಗಿಸುತ್ತಾರೆ. ಬಳಸಿರುವ ಕಚ್ಚಾ ಪದಾರ್ಥಗಳು, ಕಡ್ಡಿಯ ಉದ್ದ ಮತ್ತು ಗಾತ್ರಕ್ಕೆ ತಕ್ಕಂತೆ ಬತ್ತಿ ಉರಿಯುವ ಕಾಲ ವ್ಯತ್ಯಾಸವಾಗುತ್ತದೆ. 
ತಯಾರಿಸುವವಿಧಾನ: ಉತ್ತಮ ದರ್ಜೆಯ ಊದುಬತ್ತಿಗಳನ್ನು ತಯಾರಿಸಲು ವಿವಿಧ ವಿಧಾನಗಳನ್ನು ಅನುಸರಿಸಲಾಗುತ್ತದೆ. ಮೊಟ್ಟ ಮೊದಲು ಕೆಂಪು ಮರದ ಪುಡಿ, ಬಿಳಿಯ ಚಿಪ್ಪಿನ ಪುಡಿ (ವ್ಹೈಟ್ ಚಿಪ್ ಪೌಡರ್), ಇದ್ದಲು ಪುಡಿ, ಗಂಧದ ಪುಡಿ ಮತ್ತು ಮಸಾಲೆ ಪುಡಿ ಇವನ್ನು ತೂಕ ಮಾಡಿ ಅನಂತರ ಜರಡಿಯಾಡಿಸಿ, ಉತ್ತಮ ದರ್ಜೆಯ ನುಣುಪಾದ ಪುಡಿಯನ್ನು ಮಾಡಿಕೊಳ್ಳಬೇಕು. ಕೆಲವು ಸುಗಂಧಯುಕ್ತ ರಾಸಾಯನಿಕ ವಸ್ತುಗಳನ್ನು (ಕೌಮಾರೀನ್ ಹರಳುಗಳು, ಗುಲಾಬಿ ಹರಳುಗಳು, ವೆನಿಲನ್ ಇತ್ಯಾದಿ) ಪುಡಿಮಾಡಿ, ಮೇಲೆ ಹೇಳಿರುವ ನುಣುಪಾದ ಪುಡಿಯ ಜೊತೆ ಬೆರೆಸಬೇಕು. ಈ ಮಿಶ್ರಣಕ್ಕೆ ಶಿಲಾರಸ ಮತ್ತು ಸಾಂಬ್ರಾಣಿಯನ್ನು ಬೆರೆಸಬೇಕು. ಉತ್ತಮ ದರ್ಜೆಯ ನಯವಾದ ಸರಿ ಪಡೆಯಲು ಸ್ವಲ್ಪ ಜೇನುತುಪ್ಪವನ್ನು ಹಾಕಬೇಕು. ಯಾವುದೇ ಸಂದರ್ಭದಲ್ಲೂ ನೀರನ್ನು ಬಳಸಬಾರದು. ನೀರಿದ್ದರೆ ಊದುಬತ್ತಿ ಸರಿಯಾಗಿ ಉರಿಯುವುದಿಲ್ಲ. ಈಗ ಈ ಮಿಶ್ರಣಕ್ಕೆ ವಿವಿಧ ಸುಗಂಧಗಳ ಮಿಶ್ರಣವೊಂದನ್ನು ಹಾಕಿ ಚೆನ್ನಾಗಿ ಬೆರೆಸಬೇಕು. ನಯವಾದ ಮತ್ತು ಮೃದುವಾದ ಸರಿ ತಯಾರಾದ ಅನಂತರ, ಕೈಯಲ್ಲಿ ಹಿಡಿಯುವಷ್ಟು ಮುದ್ದೆಯನ್ನು ಮಾಡಿಕೊಳ್ಳಬೇಕು. 

	ಅನಂತರ ಬಿದಿರಿನ ಕಡ್ಡಿಗಳನ್ನು ಆರಿಸಬೇಕು. ಈ ಕಡ್ಡಿಗಳ ಒಂದು ಕಡೆಯ ಭಾಗದಲ್ಲಿ (ಸುಮಾರು 1-12 ಅಂಗುಲದವರೆಗೆ) ಬಣ್ಣಗಳನ್ನು (ಕೆಂಪು, ಹಸಿರು) ಬಳಿಯಬೇಕು. ಈ ಕಡ್ಡಿಗಳಿಗೆ ಮೊದಲೇ ಮೇಲೆ ತಯಾರಿಸಿದ ಮುದ್ದೆಯ ಮಸಾಲೆಯನ್ನು ಸಮಾನ ರೀತಿಯಲ್ಲಿ ಹಚ್ಚಬೇಕು. ಮೊದಲು ಕಡ್ಡಿಯ ಮೇಲೆ ಮಸಾಲೆಯನ್ನು ಹಚ್ಚಿ, ಅದನ್ನು ನುಣುಪಾದ ಮರದ ಹಲಗೆಯ ಮೇಲೆ ಅದುಮಿ, ಅನಂತರ ಕಡ್ಡಿಯನ್ನು ಉರುಳಿಸಬೇಕು. ಅಭ್ಯಾಸ ಮತ್ತು ಅನುಭವ ಬಂದ ಮೇಲೆ, ಒಂದು ಸಲಕ್ಕೆ ಅನೇಕ ಕಡ್ಡಿಗಳಿಗೆ ಮಸಾಲೆ ಹಚ್ಚಿ, ಮರದ ಹಲಗೆಯ ಮೇಲೆ ಉರುಳಿಸಿ, ಒಂದೇ ಸಮನಾದ ಊದಿನ ಕಡ್ಡಿಗಳನ್ನು ಪಡೆಯಬಹುದು. ಅನುಭವಿ ಕೆಲಸಗಾರನೊಬ್ಬ, ಒಂದು ಗಂಟೆಯಲ್ಲಿ 550 ಗ್ರಾಂನಿಂದ 1 ಕಿಲೊಗ್ರಾಂನಷ್ಟು ಊದುಬತ್ತಿಯನ್ನು ತಯಾರಿಸಬಹುದು. ಕಡ್ಡಿಗಳ ಮೇಲಿನ ಮಸಾಲೆ ಮಿಶ್ರಣ ದೊಡ್ಡದಾಗಿಯೂ ಮತ್ತು ದಪ್ಪನಾಗಿಯೂ ಇರಬೇಕಾದರೆ, ಮಸಾಲೆ ಸರಿ ಶಕ್ತಿಯುತವಾಗಿಯೂ ಗಟ್ಟಿಯಾಗಿಯೂ ಇರಬೇಕು. ಊದುಬತ್ತಿಗೆ ಅಪೇಕ್ಷಿತ ಬಣ್ಣ ಬರಬೇಕಾದರೆ, ನುರ್ವ ಬಣ್ಣದ ಪುಡಿಯನ್ನು ಮರದ ಹಲಗೆಯ ಮೇಲೆ ಹಾಕಿಕೊಂಡು, ಬತ್ತಿಯನ್ನು ಅದರ ಮೇಲೆ ಉರುಳಿಸಬೇಕು. ಇಷ್ಟು ಮಾಡಿದಾಗ, ಊದು ಬತ್ತಿ ಒದ್ದೆಯಾಗಿರುತ್ತದೆ. ಇದನ್ನು ಗಾಳಿಯಲ್ಲಿ ಬಿಟ್ಟು ಒಣಗಿಸಬೇಕು. ಬಹಳ ಬಿಸಿಲಿಗೆ ಬಿಡಬಾರದು. ಮೊದಲ ಸಲ ಕಡ್ಡಿಗೆ ಹಚ್ಚಿದ ಮಸಾಲೆ ಸರಿಯಾಗಿ ಅಂಟಿಕೊಳ್ಳದಿದ್ದರೆ ಕಡ್ಡಿಗಳನ್ನು ಒಣಗಿಸಿದ ಮೇಲೆ ಪುನಃ ಮಸಾಲೆ ಹಚ್ಚಿ ಹಲಗೆಯ ಮೇಲೆ ಅದುಮಿ ಉರುಳಿಸಿದರೆ, ಸಮನಾದ ಬತ್ತಿ ಸಿಗುತ್ತದೆ. ಒಣಗಿದ ಊದು ಬತ್ತಿಯ ಮೇಲೆ ಸುಗಂಧವನ್ನು ಹಚ್ಚುತ್ತಾರೆ. ಅನಂತರ ತೂಕಮಾಡಿ, ಸುರುಳಿ ಮಾಡಿ ಪಾರದರ್ಶಕ ಕಾಗದಗಳಲ್ಲಿ ಸುತ್ತಿ ರಟ್ಟಿನ ಡಬ್ಬಿಗಳಲ್ಲಿ ಅಥವಾ ತಗಡಿನ ಕೊಳವೆಗಳಲ್ಲಿ ಪ್ಯಾಕ್ ಮಾಡುತ್ತಾರೆ. ಪೊಟ್ಟಣದ ಮೇಲೆ ಹೆಸರು ಮುದ್ರಿಸಿದ ಕಾಗದ ಅಂಟಿಸಿ, ಜಲ್ಲಿ ಕಾಗದದಿಂದ ಸುತ್ತುತ್ತಾರೆ.

	ಉತ್ತಮ ದರ್ಜೆಯ ಊದುಬತ್ತಿಯಲ್ಲಿ ಸುಗಂಧ ಮತ್ತು ಪರಿಮಳ ಕೊಡುವ ವಸ್ತುಗಳನ್ನು ಚೆನ್ನಾಗಿ ಬೆರೆಸಿ ಇತರ ಕಚ್ಚಾ ಪದಾರ್ಥಗಳ ಜೊತೆ ಚೆನ್ನಾಗಿ ಅರೆದು, ಬರುವ ಮಸಾಲೆ ಮುದ್ದೆಯನ್ನು ತೆಳ್ಳಗಿನ ಬಿದಿರಿನ ಕಡ್ಡಿಗಳಿಗೆ ಅಂಟಿಸುವರು, ಕೀಳುದರ್ಜೆಯ ಊದುಬತ್ತಿಯಲ್ಲಿ, ಮೊದಲು ಬಿದಿರಿನ ಕಡ್ಡಿಗೆ ಗೋಂದು ಹಾಕಿ, ಇದ್ದಲು ಪುಡಿ ಮತ್ತು ಗಂಧದ ಪುಡಿಯನ್ನು ಅಂಟಿಸುತ್ತಾರೆ. ಕಡೆಗೆ ಈ ಕಡ್ಡಿಯನ್ನು ಸುಗಂಧದ ವಸ್ತುವಿನಲ್ಲಿ ನೆನೆಸಿಟ್ಟು, ಕೆಲವು ನಿಮಿಷಗಳ ಮೇಲೆ ಪ್ಯಾಕ್ ಮಾಡುತ್ತಾರೆ. 

	ಉತ್ತಮ ದರ್ಜೆಯ ಊದುಬತ್ತಿಯ ಗುಣ ಅದರ ಮಸಾಲೆಯನ್ನು ಅವಲಂಬಿಸಿದೆ. ಒಳ್ಳೆಯ ಮಸಾಲೆಯನ್ನು ತಯಾರಿಸಲು ಕೆಳಗಿನ ಮಾದರಿಸೂತ್ರದಲ್ಲಿ ಕೊಟ್ಟಿರುವಂತೆ ಕಚ್ಚಾ ಪದಾರ್ಥಗಳನ್ನು ಯುಕ್ತ ಪ್ರಮಾಣದಲ್ಲಿ ತೆಗೆದುಕೊಂಡು, ಚೆನ್ನಾಗಿ ಕುಟ್ಟಿ ನುಣುಪಾದ ಪುಡಿಯನ್ನು ತಯಾರಿಸಬೇಕು. ಪುಡಿಯನ್ನು ಬಟ್ಟೆಯಲ್ಲಿ ಸೋಸಬೇಕು. ಚೆನ್ನಾಗಿ ಸೋಸಿದ ಈ ಮಿಶ್ರಣದ ಪುಡಿಯೇ ಊದುಬತ್ತಿ ತಯಾರಿಕೆಗೆ ಮುಖ್ಯವಾದ ದಿನಸು. ಇದನ್ನು ಮಸಾಲೆ ಅಥವಾ ಸಾಂಬ್ರಾಣಿ ಎಂದು ಕರೆಯುತ್ತಾರೆ. ಯಾವುದೇ ಜಾತಿಯ ಉತ್ತಮ ಊದುಬತ್ತಿ ತಯಾರಿಸಬೇಕಾದರೆ, ಈ ಮಸಾಲೆಯನ್ನು ಸಿದ್ಧಪಡಿಸಿಕೊಂಡು, ಒಂದು ಡಬ್ಬಿಯಲ್ಲಿ ಇಟ್ಟುಕೊಂಡಿರಬೇಕು. ಅನಂತರ ಎಲ್ಲ ವಸ್ತುವನ್ನೂ ಸಣ್ಣದಾಗಿ ಅರೆಯಬೇಕು. ಗಟ್ಟಿಯಾದರೆ ಸ್ವಲ್ಪ ಪನ್ನೀರನ್ನು ಪುನಃ ಹಾಕಿ ಚೆನ್ನಾಗಿ ಅರೆಯಬೇಕು. ಮಸಾಲೆ ಬೆಣ್ಣೆಯಂತೆ ಮಂದವಾಗಿರಬೇಕು. ಹೆಚ್ಚಿಗೆ ಪನ್ನೀರು ಹಾಕಿ ಮಸಾಲೆಯನ್ನು ಅಳ್ಳಕ ಮಾಡಬಾರದು. ಅನಂತರ ಈ ಮಿಶ್ರಣವನ್ನು ಸಿದ್ಧವಿರುವ ಬಿದಿರಿನ ಕಡ್ಡಿಗಳಿಗೆ ಹಚ್ಚಬೇಕು. ಊದು ಬತ್ತಿಯ ಸುವಾಸನೆ ಕಡಿಮೆಯಾಗಿದ್ದರೆ ಮೈದಾಲ ಪುಡಿಯನ್ನು ಮಿಶ್ರಣದಲ್ಲಿ ಹಾಕಿ ಕಲೆಸಬೇಕು. ಆಗ ಊದುಬತ್ತಿಗೆ ಸಾಕಷ್ಟು ಸುವಾಸನೆ ಬರುತ್ತದೆ. ಯಥಾಪ್ರಕಾರ ಇವನ್ನು ಪ್ಯಾಕ್ ಮಾಡಬಹುದು.

	ಜವಾಜಿ ಬತ್ತಿ ತಯಾರಿಸಬೇಕಾದರೆ ಮೇಲೆ ತಿಳಿಸಿದ ಮುಖ್ಯ ಸಾಮಗ್ರಿ ತೆಗೆದುಕೊಂಡು ಈ ಕೆಳಗಿನ ವಸ್ತುಗಳನ್ನು ಅದಕ್ಕೆ ಸೇರಿಸಬೇಕು.

	ಇದೇ ರೀತಿ ಸಾಮಗ್ರಿಗಳನ್ನು ಬದಲಾಯಿಸಿಕೊಂಡು, ಪುನುಗಿನ ಊದುಬತ್ತಿ, ಕಸ್ತೂರಿ ಊದುಬತ್ತಿ ಮತ್ತು ಸಾದಾ ಊದುಬತ್ತಿಗಳನ್ನು ತಯಾರಿಸುತ್ತಾರೆ.

	ಮಸಾಲೆ ಬತ್ತಿ, ಜವಾಜಿ ಬತ್ತಿ, ದರಬಾರ್ ಬತ್ತಿ, ಪುನುಗಿನ ಬತ್ತಿ ಇತ್ಯಾದಿ ಅನೇಕ ರೀತಿಯ ಊದುಬತ್ತಿಗಳಿವೆ. ವಿವಿಧ ಜಾತಿಗಳನ್ನು ಸೂಚಿಸಿ, ಗಿರಾಕಿಗಳನ್ನು ಆಕರ್ಷಿಸಲು, ಹಸಿರು, ಕೆಂಪು, ಕಪ್ಪು ಮತ್ತು ಹಳದಿ ಬಣ್ಣದ ಊದುಬತ್ತಿಗಳು ಇರುತ್ತವೆ. ಊದುಬತ್ತಿಯ ಕಡ್ಡಿಗಳು ತೆಳ್ಳಗೂ ದಪ್ಪಗೂ ಇರುತ್ತವೆ. ಕಡ್ಡಿಗಳ ಉದ್ದ: 8 ಅಂಗುಲ, 8.5 ಅಂಗುಲ, 10 ಅಂಗುಲ, 11 ಅಂಗುಲ ಮತ್ತು 13 ಅಂಗುಲ. ಊದುಬತ್ತಿಯ ಉದ್ದ ಮತ್ತು ಗಾತ್ರವನ್ನು ಇನ್ನೂ ಕ್ರಮೀಕರಿಸಿಲ್ಲ.

	ಊದುಬತ್ತಿಯ ರಫ್ತು: ಊದುಬತ್ತಿಯನ್ನು ಮುಂಬಯಿ ಮತ್ತು ಕೋಲ್ಕತ್ತಗಳ ಮುಖಾಂತರ ಹೊರಗಿನ ದೇಶಗಳಿಗೆ ರಫ್ತು ಮಾಡಲಾಗುತ್ತದೆ. 

	ಊದುಬತ್ತಿ ಉದ್ಯಮ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದೆ. ಹೆಂಗಸರು ತಮ್ಮ ಮನೆಗೆ ಊದುಬತ್ತಿಯ ಮಸಾಲೆಯನ್ನು ತೆಗೆದುಕೊಂಡು ಹೋಗಿ, ಸಂಸಾರದವರೆಲ್ಲ ಸೇರಿ, ಊದುಬತ್ತಿ ತಯಾರಿಸಿ ಕೂಲಿ ಸಂಪಾದಿಸುತ್ತಾರೆ. ಕೆಲಸಗಾರರು ಗುತ್ತಿಗೆಯ ಪ್ರಕಾರ ಸಂಪಾದನೆ ಮಾಡುತ್ತಾರೆ. ಚುರುಕಾಗಿ ಕೆಲಸ ಮಾಡುವವರು ಎಂಟು ಗಂಟೆಯಲ್ಲಿ ಅರ್ಧ ಕಿಲೋ ಊದುಬತ್ತಿ ತಯಾರಿಸುತ್ತಾರೆ.

	ಬಿದಿರಿನ ಕಡ್ಡಿಗಳನ್ನು ಮಾಡುವುದು ಮತ್ತು ತಗಡಿನ ಕೊಳವೆಗಳನ್ನು ತಯಾರಿಸುವುದು ಇವೆರಡೂ ಊದುಬತ್ತಿಯ ತಯಾರಿಕೆಯನ್ನು ಅವಲಂಬಿಸಿರುವ ಗೃಹಕೈಗಾರಿಕೆಗಳು. ಕರ್ನಾಟಕ ರಾಜ್ಯದಲ್ಲಿ ನೂರಕ್ಕಿಂತ ಹೆಚ್ಚು ಊದುಬತ್ತಿ ಕಾರ್ಖಾನೆಗಳಿವೆ. ಬೆಂಗಳೂರು, ಮೈಸೂರು, ಚಿಂತಾಮಣಿ, ಕೋಲಾರ ಮತ್ತು ಬೆಳಗಾಂವಿ ಇವು ಪ್ರಮುಖ ಸ್ಥಳಗಳು.	
  *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ